ಇದು ಒಳ್ಳೆಯದೇ ಆಯ್ತು!...ಸೋಲಿನ ಬಳಿಕ ಶಾಕಿಂಗ್​ ಹೇಳಿಕೆ ನೀಡಿದ ಸಿಎಸ್​ಕೆ ನಾಯಕ ಗಾಯಕ್ವಾಡ್​ | CSKvsRR

CSKvRR | ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು
CSKvRR | ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು
Published on
CSKvRR: 19ನೇ ಐಪಿಎಲ್ ಆರಂಭಿಕ ಹಂತದಲ್ಲೇ ಕ್ರಿಕೆಟ್ ಲೋಕದ ಗಮನ ಸೆಳೆದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ, ರಾಜಸ್ಥಾನ ರಾಯಲ್ಸ್ ವಿರುದ್ಧ ಭಾರೀ ಅಂತರದ ಸೋಲನ್ನು ಅನುಭವಿಸಿತು. 
ಗುವಾಹಟಿಯ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಹಣಾಹಣಿಯಲ್ಲಿ ರಾಜಸ್ಥಾನ ರಾಯಲ್ಸ್ ಸಿಎಸ್‌ಕೆ ತಂಡದ ಮೇಲೆ ಎಲ್ಲಾ ಹಂತದಲ್ಲೂ ಹಿಡಿತ ಸಾಧಿಸುವ ಮೂಲಕ ಜಯಭೇರಿ ಬಾರಿಸಿತು.

ಸೋಲಿನ ಬಗ್ಗೆ ನಿರಾಶೆ ಇಲ್ಲ...

ಪಂದ್ಯದ ಬಳಿಕ ಮಾತನಾಡಿದ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್, ಈ ಫಲಿತಾಂಶದಿಂದ ಯಾವುದೇ ರೀತಿಯ ನಿರಾಶೆ ಇಲ್ಲ ಎಂದಿದ್ದಾರೆ. ಮಳೆ ಬಂದ ಕಾರಣ ಪಿಚ್​ ಜಿಗುಟಾಗಿತ್ತು, ಚೆಂಡು ಸರಿಯಾಗಿ ಬ್ಯಾಟ್‌ಗೆ ಬರುತ್ತಿರಲಿಲ್ಲ, ಅದರಲ್ಲೂ ವಿಶೇಷವಾಗಿ ಪವರ್​ ಪ್ಲೇನಲ್ಲಿ ಜೋಫ್ರಾ ಆರ್ಚರ್ ಮತ್ತು ಬರ್ಗರ್ ಬೌಲಿಂಗ್ ದಾಳಿ ಅತ್ಯಂತ ನಿಖರವಾಗಿತ್ತು ಎಂದು ಶ್ಲಾಘಿಸಿದ್ದಾರೆ.
ಮಧ್ಯಮ ವೇಗಿಗಳಿಗೆ ಮಾತ್ರವಲ್ಲದೆ ಸ್ಪಿನ್ನರ್‌ಗಳಿಗೂ ಪಿಚ್‌ನಿಂದ ಸಾಕಷ್ಟು ನೆರವು ದೊರೆಯುತ್ತಿತ್ತು. ಈ ಕಠಿಣ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡುವುದು ಸವಾಲಿನ ಸಂಗತಿ, ಆದರೂ ಕೂಡ ಬ್ಯಾಟಿಂಗ್‌ನಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಬಹುದಿತ್ತು ಮತ್ತು ಕನಿಷ್ಠ 150 ರಿಂದ 160 ರನ್‌ಗಳವರೆಗೆ ಪಂದ್ಯವನ್ನು ಕೊಂಡೊಯ್ಯಬಹುದಿತ್ತು ಎಂದಿದ್ದಾರೆ. 

ಇಂಪ್ಯಾಕ್ಟ್ ಪ್ಲೇಯರ್ ರೂಲ್​ ಬಗ್ಗೆ ರುತು ಮಾತು.. 

ಇಂದಿನ ದಿನಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇರುವುದರಿಂದ ಯಾವುದೇ ಸ್ಕೋರನ್ನು ಉತ್ತಮ ಮೊತ್ತ ಎಂದು ಮೊದಲೇ ನಿರ್ಧರಿಸಲು ಸಾಧ್ಯವಿಲ್ಲ ಎಂದಿರುವ ಗಾಯಕ್ವಾಡ್​, ಸೋಲನ್ನು ಮರೆತು ಮುಂದುವರಿಯುವುದು ಉತ್ತಮ ಎಂದರು. ಈ ಪಂದ್ಯದಲ್ಲಿನ ತಪ್ಪುಗಳಿಂದ ಪಾಠ ಕಲಿಯುವುದು ಮುಖ್ಯ, ತಂಡದಲ್ಲಿ ಅನೇಕ ಯುವ ಆಟಗಾರರಿರುವುದರಿಂದ ಆರಂಭದಲ್ಲಿ ಆತಂಕವಿರುವುದು ಸಹಜ, ಆದರೆ ಟೂರ್ನಿಯ ಮೊದಲೇ ಇಷ್ಟು ದೊಡ್ಡ ಮಟ್ಟದ ತಪ್ಪುಗಳೊಂದಿಗೆ ಆಟವನ್ನು ಪ್ರಾರಂಭಿಸುವುದು ಒಂದು ರೀತಿಯಲ್ಲಿ ಒಳ್ಳೆಯದು. ಇದು ತಂಡಕ್ಕೆ ಮತ್ತಷ್ಟು ಸುಧಾರಿಸಿಕೊಳ್ಳಲು ಅವಕಾಶ ನೀಡುತ್ತದೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಈ ಸೋಲಿನಿಂದ ಪಾಠ ಕಲಿತು ಬ್ಯಾಟ್ಸ್‌ಮನ್‌ಗಳು ತಮ್ಮ ಸಾಮರ್ಥ್ಯವನ್ನು ನಂಬಿ ಧನಾತ್ಮಕವಾಗಿ ಆಡಬೇಕು ಮತ್ತು ಮುಂಬರುವ ಪಂದ್ಯಗಳಲ್ಲಿ ಇದೇ ಬ್ಯಾಟಿಂಗ್ ಲೈನ್-ಅಪ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ತಮಗಿದೆ ಎಂದು ಸಿಎಸ್​ಕೆ ನಾಯಕ ತಿಳಿಸಿದ್ದಾರೆ.

ಪಂದ್ಯದ ಸಾರಾಂಶ

ಟಾಸ್​​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಕೇವಲ 127 ರನ್‌ಗಳಿಗೆ ಆಲೌಟ್ ಆಯಿತು. ಎಂಟನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಜೇಮೀ ಓವರ್ಟನ್ ಜವಾಬ್ದಾರಿಯುತವಾಗಿ 43 ರನ್‌ಗಳನ್ನು ಗಳಿಸದಿದ್ದರೆ, ಸಿಎಸ್​ಕೆ 100 ರನ್‌ಗಳ ಗಡಿಯನ್ನೂ ದಾಟದೆ ಮುಖಭಂಗ ಅನುಭವಿಸುವ ಸಾಧ್ಯತೆಯಿತ್ತು. ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಯುವ ಆಟಗಾರರಾದ ವೈಭವ್​ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್​ರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಕೇವಲ 12.1 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net